ಇಫಿಜೀನಿಯ 2

	ಚಿಕ್ಕ ಮೂಲಿಕೆ ಸಸ್ಯಗಳ ಜಾತಿಯದು. 12 ಪ್ರಭೇದಗಳಿವೆ. ದಕ್ಷಿಣ ಆಫ್ರಿಕ, ಮೆಡಗಾಸ್ಕರ್. ಭಾರತ, ಆಸ್ಟ್ರೇಲಿಯ, ನ್ಯೂಜಿûಲೆಂಡ್‍ಗಳ ಉಷ್ಣವಲಯ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ ಭಾರತದಲ್ಲಿ ಈಜಾತಿಗೆ ಸೇರಿದ ಇಫಿಜೀನಿಯ ಇಂಡಿಕ ಮತ್ತು ಇಫಿಜೀನಿಯಪ್ಯಾಲಿಡ ಎಂಬ ಎರಡು ಮುಖ್ಯಪ್ರಭೇದಗಳು ಅನೇಕ ಕಡೆಗಳಲ್ಲಿ ಕಂಡು ಬಂದಿವೆ.

	ಈ ಸಸ್ಯದ ಕಾಂಡ ಬಲು ಸಣ್ಣದು. ಭೂಮಿಯ ಒಳಗೆ ಸಣ್ಣ ಈರುಳ್ಳಿಯಂಥ ಗೆಡ್ಡೆಗಳಿರುತ್ತವೆ. ಎಲೆಗಳು ಕೆಲವೇ ಇದ್ದು ಹೂಗಳು ಬಹು ಆಕರ್ಷಕ ವರ್ಣಗಳಿಂದ ಕೂಡಿ ಬಹು ಸುಂದರವಾಗಿರುತ್ತವೆ. ಹೂಗಳಲ್ಲಿ ಆರು ಪೇರಿಯಾಂತ್ ಭಾಗಗಳು, ಅರು ಕೇಸರಗಳು ಮತ್ತು ಮೂರು ಭಾಗಗಳಾಗಿ ವಿಂಗಡಣೆಗೊಂಡ ಅಂಡಾಶಯಗಳು ಇವೆ. ಕಾಯಿ ಅನಂತರ ಮೂರು ಭಾಗವಾಗಿ ಒಡೆದಾಗ ಬೀಜಗಳು ಪ್ರಸಾರವಾಗುತ್ತವೆ.

	ಇಫಿಜೀನಿಯ ಇಂಡಿಕ ಸಸ್ಯದ ಹೂಗಳಿಂದ ಒಂದು ಬಗೆಯ ಕೆಂಪು ಬಣ್ಣವನ್ನು ತೆಗೆಯುತ್ತಾರೆ. ಗೆಡ್ಡೆಗಳ ರಸವನ್ನು ಬೆಳ್ಳುಳ್ಳಿ. ನಿಂಬೆ ಮತ್ತು ಜೀರಿಗೆ ರಸಗಳೊಡನೆ ಬೆರೆಸಿ ತಲೆಗೆ ಲೇಪಿಸಿಕೊಂಡು ಕ್ರಮಾನುಗತವಾಗಿ ಒಂದು ವಾರ ಸ್ನಾನ ಮಾಡಿದರೆ ಅರ್ಧ ತಲೆನೋವಿನ ಕಾಯಿಲೆ ಗುಣವಾಗುತ್ತದೆ. ಹೊಟ್ಟೆ ಶೂಲೆ ಮತ್ತಿತರ ಉದರ ಸಂಬಂಧ ತೊಂದರೆಗಳಿಗೆ ಇದರ ರಸವನ್ನು ಸ್ವಲ್ಪ ಬಿಸಿನೀರಿಗೆ ಸೇರಿಸಿ, ಈ ಮಿಶ್ರಣಕ್ಕೆ ಹಸುವಿನ ತುಪ್ಪ ಮತ್ತು ಜೇನುತುಪ್ಪಗಳನ್ನು ಬೆರೆಸಿ ಸೇವಿಸಿದರೆ ಕೇವಲ ಅರ್ಧ ಗಂಟೆಯೊಳಗೆ ಉದರಶೂಲೆ ನಿವಾರಣೆಯಾಗುತ್ತದೆ. ತಲೆಯಲ್ಲಿ ನೀಳವಾಗಿ ಸೊಂಪಾಗಿ ಕೂದಲು ಬೆಳೆಯಲು ಹೂಗಳ ರಸವನ್ನು ಚಿಟ್ಟ ಹರಳೆಣ್ಣೆ ಮತ್ತು ನೆಲ್ಲಿಕಾಯಿಗಳ ಬೀಜದ ರಸದೊಡನೆ ಬೆರೆಸಿ ಉಪಯೋಗಿಸುವ ಪದ್ಧತಿ ಸೋಲಿಗರಲ್ಲಿದೆ.

(ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ